ಅಸಫ್ ಝಾ I ನ ಮರಣಾನಂತರ ರಾಜನಾದ ಅವನ ಮಗ ಸಲಾಬತ್‌ಖಾನನ ತಮ್ಮ. ನಿಜಾಮ್ ಎಂದು ಹೆಸರು. ಸಲಾಬತ್‌ಖಾನ್ ಇವನನ್ನು 1759ರಲ್ಲಿ ರಾಜ್ಯದ ಮುಖ್ಯಾಧಿಕಾರಿಯನ್ನಾಗಿ ನಿಯಮಿಸಿದ. ಮುಂದಿನ ವರ್ಷವೇ ಮರಾಠೆಯ ಸದಾಶಿವರಾಯನೊಡನೆ ನಡೆದ ಯುದ್ಧದಲ್ಲಿ ಉದ್ಗೀರ್ ಎಂಬಲ್ಲಿ ನಿಜಾಮ್ ಸೋತ. ಅವಮಾನಿತನಾಗಿ ಮತ್ತೆ 1762ರಲ್ಲಿ ಮರಾಠರ ಮೇಲೆ ಕಾದಿ, ಸೋತು ಪುಣೆಯ ಸಮೀಪದ ಉರುಳಿ ಎಂಬಲ್ಲಿಂದ ಓಡಿಹೋದ. ಬಿದರೆ ರಾಜ್ಯಕ್ಕೆ ಬಂದು 1762ರಲ್ಲಿ ಸಹೋದರ ಸಲಾಬತ್ಖಾನನನ್ನು ಸೆರೆಯಲ್ಲಿಟ್ಟು ತಾನೇ ರಾಜನಾದ. ಮೊಗಲ್ ಸಾಮ್ರಾಟ ಷಾ ಆಲಮ್ ಇವನಿಗೆ ನಿಜಾಮ್-ಉಲ್-ಮುಲ್ಕ್‌ ಎರಡನೆಯ ಅಸಫ್ ಝಾ ಎಂಬ ಬಿರುದನ್ನು ದಯಪಾಲಿಸಿದ. ಸ್ವಲ್ಪ ಕಾಲದವರೆಗೆ ಮರಾಠರ ಸ್ನೇಹಿತನಾಗೂ ಅನಂತರ ಹೈದರನ ಪಕ್ಷವನ್ನು ವಹಿಸಿಯೂ ತನ್ನ ರಾಜ್ಯವಿಸ್ತರಣೆಗೆ ಹೊಂಚು ಹಾಕುತ್ತಿದ್ದ. 1795ರಲ್ಲಿ ಇವನಿಗೂ ಮರಾಠರಿಗೂ ಖರ್ಡ ಎಂಬಲ್ಲಿ ಆದ ಯುದ್ಧದಲ್ಲಿ ಈತ ಸೋತು ಮೂರು ವರ್ಷಗಳಲ್ಲಿ ಐದುಕೋಟಿ ರೂಪಾಯಿಗಳನ್ನು ಕೊಡುವುದಾಗಿಯೂ ದೌಲತಾಬಾದ್ ಕೋಟೆಯನ್ನು ಬಿಟ್ಟುಕೊಡುವುದಾಗಿಯೂ ಒಪ್ಪಂದವನ್ನು ಮಾಡಿಕೊಂಡನಾದರೂ ಅದನ್ನು ಪಾಲಿಸಲಿಲ್ಲ. ನಾಲ್ಕನೆಯ ಮೈಸೂರು ಯುದ್ಧದಲ್ಲಿ ಇಂಗ್ಲಿಷರು ಮತ್ತು ಮರಾಠರೊಡನೆ ಟಿಪ್ಪುಸುಲ್ತಾನನ ಮೇಲೆ 1799ರಲ್ಲಿ ದಂಡೆತ್ತಿಹೋದ. ಟಿಪ್ಪುವಿನ ಮರಣಾನಂತರ ಕಾರ್ನ್ವಾಲೀಸ್ ಈಶಾನ್ಯದ ಕೆಲವು ಭಾಗಗಳನ್ನು ನಿಜಾಮನಿಗೆ ಬಳುವಳಿಯಾಗಿ ಕೊಟ್ಟ. 1800ರಲ್ಲಿ ಬ್ರಿಟಿಷರಿಗೆ ಕೊಡಬೇಕಾದ ವಾರ್ಷಿಕ ಕಾಣಿಕೆಯನ್ನು ಕೊಡಲಿಲ್ಲವೆಂಬ ಕಾರಣದಿಂದ ರಾಜ್ಯದ ಕೆಲವು ಭಾಗಗಳು ಬ್ರಿಟಿಷರ ರಾಜ್ಯಕ್ಕೆ ಸೇರಿಹೋದವು. ಯುದ್ಧಗಳಿಂದ ಬೇಸತ್ತು ವೃದ್ಧನಾಗಿದ್ದ ನಿಜಾಮ್ 1802ರಲ್ಲಿ ಮರಣ ಹೊಂದಿದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ